19/06/2022
ಕಲಗಚ್ಚೆಂದು ಅಂದು ನೀ ಕಸಮುಸುರೆಯನ್ನೆಲ್ಲಾ
ತಂದು ನನ್ನ ಮುಂದೆ ಸುರಿದೆ.
ಅದ ಕಣ್ಣುಮುಚ್ಚಿಯೇ ನಾ ಕುಡಿದೆ.
ಹುಲ್ಲನು ಹಾಕಲೂ ನೀನಂದು ಕಂಜೂಸು ಮಾಡಿದೆ,
ಇರಲಿ,ಇಷ್ಟಾದರೂ ಸಿಕ್ಕಿತ್ತಲ್ಲವೆಂದು
ನಾ ಅದರಲ್ಲಿಯೇ ತೃಪ್ತಿಪಟ್ಟೆ.
ಬೇಲಿಯೊಳಗೆ ಹುಲುಸಾಗಿ ಬೆಳೆದಿದ್ದ ಹಸಿರು ಹುಲ್ಲನು
ಆಸೆಯಲಿ ನಾನಂದು ಒಮ್ಮೆ ಇಣುಕಿ ನೋಡಿದೆ,
ಅದ ಕಂಡು ಕೋಪದಿ ನೀ ನನಗೆ ಬಾಸುಂಡೆ ಬರುವಂತೆ ಹೊಡೆದೆ.
ಎನ್ನ ಕರುವು ಅಂದು ಹಾಲಕುಡಿಯುವಾಗ
ನಿನಗೆಲ್ಲಿ ಅದು ಉಳಿಸದೆ ಪೂರ್ತಿ ಬರಿದು ಮಾಡಿಬಿಡುವುದೋ
ಎಂಬ ಸಿಟ್ಟಿನಲಿ ನೀನದ ದರದರನೆ
ಎಳೆದುಕೊಂಡು ಹೋಗಿ ಬಹುದೂರದಲಿ ಕಟ್ಟಿದೆ,
ನೀನೂ ನನ್ನ ಮಗುವೇ,ನಿನಗೂ ಹಾಲಿನಲಿ
ಪಾಲನೀಡುವುದು ಎನ್ನ ಕರ್ತವ್ಯವೆಂದೇ ನಾನಂದು ಬಗೆದೆ.
ಎನ್ನ ಹಾಲಿನಲಿ ಅದೇನೋ ಬೆಣ್ಣೆ,ಮೊಸರು,ತುಪ್ಪ
ಮುಂತಾದವುಗಳನೆಲ್ಲಾ ತಯಾರಿಸಿ,ಅವುಗಳ ಮಾರಿ
ನಿನ್ನ ಸಾಲವನೆಲ್ಲಾ ತೀರಿಸಿಕೊಂಡೆಯೆಂದು
ಅಂದು ನೀ ಅದ್ಯಾರ ಬಳಿಯೋ ಹೇಳುತ್ತಿದ್ದೆ,
ಅದ ಕೇಳಿಸಿಕೊಂಡ ನಾನು,ಎನಗೆ ಸೂರು ಕೊಟ್ಟ ನಿನ್ನ
ಮನೆಯೊಳಗೆ ಸದಾ ಸಮೃದ್ಧಿ ನೆಲಸಿರಲೆಂದು ಮನದಲ್ಲಿಯೇ ಹರಸಿದೆ.
ನಿನ್ನ ತೋಟದಲಿ ಈ ಬಾರಿ ಬಂದ
ನಿಬ್ಬೆರಗಾಗಿಸುವ ಫಸಲನ್ನು ಕಂಡು ಹರುಷದಿ
ಎಲ್ಲಾ ನಿನ್ನ ಗೊಬ್ಬರದ ಮಹಿಮೆಯೆಂದು ನೀನಂದು
ನನ್ನ ಹೊಗಳಿದ್ದು ನನಗಿನ್ನೂ ನೆನಪಿದೆ.
ಕೆಲ ಹಬ್ಬ ಹರಿದಿನಗಳಲ್ಲಿ ನೀ ನನಗೆ ತೋರುತ್ತಿದ್ದ
ಭಕ್ತಿ ಭಾವವ ಕಂಡು ನಾ ಭಾರೀ ಸಂಭ್ರಮ ಪಟ್ಟಿದ್ದಿದೆ,
ದೀಪಾವಳಿಯ ಗೋಪೂಜೆಯ ಆ ದಿನಕ್ಕಾಗಿಯಂತೂ ವರ್ಷಪೂರ್ತಿ ಕಾದಿರುತ್ತಿದ್ದೆ.
ಮುದಿಯಾಗಿ ಹಾಲುಕೊಡಲಾಗದೆ ಹೋಗಿದ್ದ ನನ್ನನ್ನಿಂದು,
ಮೊನ್ನೆದಿನ ನೀ ಕೊಟ್ಟಿಗೆಯ ಒಂದು ಮೂಲೆಗೆ ತಂದು
ಕಟ್ಟುತ್ತಾ,ಇನ್ಮುಂದೆ ಇದೇ ನಿನ್ನ ಜಾಗವೆಂದೆ,
ಅದ್ಯಾವ ಘಳಿಗೆಯಲಿ ಹಾಗೆ ಹೇಳಿದೆಯೋ,
ನಾ ಅದ ಕೇಳಿ ಬಹಳ ನೊಂದು ಕೊಂಡೆ.
ನಾ ನಿನಗೆ,ನೀ ನನಗೆ ಆಸರೆಯಾಗಿ ಬದುಕುತ್ತಾ ಎಷ್ಟು
ವರ್ಷಗಳಾದವೆಂದು ಅಂದು ನಾ ಲೆಕ್ಕಹಾಕಲು ಶುರುಮಾಡಿದೆ.
ಅದೇ ನೋವಿನಲ್ಲಿದ್ದ ನನ್ನ ಮುಂದೆ,ನಿನ್ನ ಮಡದಿ
ತಂದು ಹುಲ್ಲು ನೀರನು ಇಟ್ಟಾಗಲೂ ನಾ ಬೇಸರದಿ ಮುಟ್ಟದೆ ಹೋದೆ.
ನಿನ್ನೆಯ ದಿನ ನೀ ನನ್ನ ಒಂದು ಲಾರಿಯಲಿ
ತುಂಬಿಸಿಕೊಂಡು ಅದ್ಯಾವುದೋ ಕಟ್ಟಡದ ಮುಂದೆ ತಂದು ನಿಲ್ಲಿಸಿದೆ,
ನಾ ಹುಲ್ಲುನೀರನು ಮುಟ್ಟುತ್ತಿಲ್ಲವೆಂದು
ಕಂಗೆಟ್ಟ ನೀನು, ಬಹುಶಃ
ಆರೋಗ್ಯ ತಪಾಸಣೆಗೆಂದು ಪಶುವೈದ್ಯರಬಳಿ
ಎನ್ನ ಕರೆದುಕೊಂಡು ಬಂದಿರಬಹುದೆಂದು ಒಳಗೊಳಗೇ ಖುಷಿಪಟ್ಟೆ.
ಆದರೆ,ಕಟ್ಟಡದ ಗೇಟನ್ನು ದಾಟಿ ಬಂದ
ವ್ಯಕ್ತಿಯೊಬ್ಬನ ಕೈಯಲ್ಲಿ ನೆತ್ತರು ಸವರಿದ್ದ
ಕತ್ತಿಯಿದ್ದುದ ಕಂಡು,ಭಯದಿಂದಲಿ ನಾ ನಡುಗಿದೆ.
ಆ ವ್ಯಕ್ತಿ ನನ್ನನೊಮ್ಮೆ ದಿಟ್ಟಿಸಿ ನೋಡಿ,ಈ ಮುದಿ ದನಕ್ಕೆ
ಇಷ್ಟೇ ಕೊಡಲಾಗುವುದೆಂದು,ನಿನ್ನ ಕೈಗೆ ಒಂದಿಷ್ಟು ಕಾಸನ್ನು
ನೀಡಿದಾಗಲೇ ತಿಳಿದದ್ದು,ನೀ ನನ್ನನು
ಆ ಕಟುಕನಿಗೆ ಮಾರಲೆಂದೇ ಕರೆತಂದಿದ್ದೆ.
ನಾ ಆ ಕ್ಷಣವೇ ಜೀವಂತ ಶವವಾದೆ.
ಇಲ್ಲಿಯವರೆಗೂ ಹಾಲಿನ ಹೊಳೆಯ ಹರಿಸುವುದನು ಮಾತ್ರ
ಅರಿತಿದ್ದ ನಾನು,ಈಗ ಮೊದಲ ಬಾರಿ,ಕೊನೆಯ ಬಾರಿ
ಕಣ್ಣೀರಿನ ಹೊಳೆಯನ್ನೇ ಹರಿಸಿದೆ.
ಆದರೆ ನೀ...ನನಗೂ ನಿನಗೂ ಇರುವ ಸಂಬಂಧ ಇಂದಿಲ್ಲಿಗೇ
ಕಡಿದುಬಿತ್ತು ಎನ್ನುವ ತೆರದಿ,ಆ ಕಟುಕ ಕೊಟ್ಟ ಹಣವನು ಎಣಿಸುತ್ತಾ ಒಮ್ಮೆಯೂ ಹಿಂದಿರುಗಿ ಎನ್ನ ನೋಡದೆ ಮುಂದೆ ಮುಂದೆ ಸಾಗಿದೆ.
ಸಂಚನ ಎಂ ಎಸ್
ಹೊಸನಗರ
(ಅಂಬೆಗೆ ಬೆಂಬಲವಾಗಿ ನಿಲ್ಲೋಣ ನಾವು.ಮುಂದೆಯೂ ಅವಳ ಪ್ರೇಮದಲಿ ಮಿಂದೇಳಬೇಕೆಂಬ ಹಂಬಲವಿರುವ ಮಂದಿಯನ್ನೆಲ್ಲಾ ಒಂದಾಗೋಣ ಬನ್ನಿ ಎಂದು ಇಂದು ಕರೆಯುತ್ತಿದೆ #ಅಭಯಾಕ್ಷರ ವೆಂಬ ಮಹದಾಂದೋಲನವು)