17/11/2023
*ಗೋಸ್ವರ್ಗದಲ್ಲಿ ಸಂಭ್ರಮದಿಂದ ನೆರವೇರಿದ ದೀಪಾವಳಿ ಗೋಸೇವೆ.*
ಶ್ರೀಗುರುಗಳ ಶುಭಾಶೀರ್ವಾದ ಹಾಗೂ ಗೋಭಕ್ತರ ಶುಭ ಹಾರೈಕೆ ಮತ್ತು ಸಹಕಾರದಲ್ಲಿ ಶೋಭಕೃತ್ ಸಂವತ್ಸರದ ಕಾರ್ತೀಕ ಶುಕ್ಲ ಪ್ರತಿಪದೆ, ದಿ.೧೪-೧೧-೨೦೨೩ ಮಂಗಳವಾರಂದು ಗೋಸ್ವರ್ಗದ ಪುಣ್ಯ ಭೂಮಿಯಲ್ಲಿ ಹಲವು ಗೋಸೇವೆಗಳು ಭಕ್ತಿಭಾವದಿಂದ ನೆರವೇರಿತು. ಗೋಸ್ವರ್ಗ ಮತ್ತು ಗೋವುಗಳನ್ನು ಸಿಂಗರಿಸಿ ದೀಪಾವಳಿ ಸಂಭ್ರಮವನ್ನು ಇಮ್ಮಡಿಗೊಳಿಸಲಾಯಿತು. ಬಾಸಿಂಗ, ಹಣೆಪಟ್ಟಿ, ಅಡಿಕೆ ದಂಡೆ ಮುಂತಾದ ಅಲಂಕಾರಿಕ ಪರಿಕರಗಳಿಂದ ಗೋಸ್ವರ್ಗದ ನಂದಿ-ಧೇನುಗಳನ್ನು ಸಿಂಗಾರಮಾಡಿ ಪೂಜಿಸಲಾಯಿತು. ವೈಯ್ಯಕ್ತಿಕ ಗೋಪೂಜೆ, ಸಾಮೂಹಿಕ ಗೋಪೂಜೆ, ಗೋದಾನ, ತೀರ್ಥರಾಜ ಮಹಾಸ್ನಾನ, ಸರ್ವಗೋಗ್ರಾಸ ಸೇವೆ, ಗೋದೀಪೋತ್ಸವ ಮುಂತಾದ ಸೇವೆಗಳು ಬೆಳಗಿನಿಂದ ಸಂಜೆ ತನಕ ನೆರವೇರಿದವು. ಗೋವುಗಳಿಗೆ ಕಡುಬು, ಬೆಲ್ಲ, ಹಿಂಡಿ, ರೊಟ್ಟಿ, ಚರು(ಅನ್ನ) ಸಹಿತ ವಿಶೇಷ ಗೋಗ್ರಾಸ ನೀಡಲಾಯಿತು. ಸ್ಥಳೀಯ ಸಂಪ್ರದಾಯದಂತೆ ಇಲ್ಲಿ ಪಾಲನೆಗೊಳ್ಳುತ್ತಿರುವ ಗೋವುಗಳ ಸಂಖ್ಯೆಯಷ್ಟು ತೆಂಗಿನಕಾಯಿಯನ್ನು ಕ್ಷೇತ್ರದ ರಕ್ಷಾ ದೇವತೆಗಳಿಗೆ ಸಮರ್ಪಿಸಲಾಯಿತು. ನೂರಾರು ಗೋಪ್ರೇಮಿಗಳು ಆಗಮಿಸಿ ಗೋಸೆವೆ ಮಾಡಿದರು. ಬೆಳಿಗ್ಗೆ ಗೋಪೂಜೆಯೊಂದಿಗೆ ಆರಂಭಗೊಂಡ ಸೇವೆಗಳು ಸಂಜೆ ಗೋದೀಪೋತ್ಸವ ಮತ್ತು ಗೋಗಂಗಾರತಿಯೊಂದಿಗೆ ಸಂಪನ್ನಗೊಂಡಿತು. ದೀಪಾವಳಿಯ ವಿಶೇಷ ಗೋಸೇವಾ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲಾ ಸೇವಾ ಬಿಂದುಗಳಿಗೆ ಹಾಗೂ ಸೇವೆಗೈದ ಎಲ್ಲಾ ಸೇವಾಕರ್ತರಿಗೆ ಗೋಮಾತೆ ಮತ್ತು ಶ್ರೀಗುರುಗಳ ಸಂಪೂರ್ಣ ಆಶೀರ್ವಾದ ಲಭಿಸಿ ಇನ್ನೂ ಹೆಚ್ಚಿನ ಸೇವೆ ಮಾಡುವ ಶಕ್ತಿ ನೀಡಲಿ ಎಂಬ ಹಾರೈಕೆಯೊಂದಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇವೆ.
ಗೋಸ್ವರ್ಗ, ಶ್ರೀರಾಮದೇವ ಭಾನ್ಕುಳಿಮಠ