04/06/2024
ಮುಂದೇನೊ, ಮತ್ತೇನೊ, ಇಂದಿಗಾ ಮಾತೇಕೆ? |
ಸಂದರ್ಭ ಬರಲಿ, ಬಂದಾಗಳಾ ಚಿಂತೆ ||
ಹೊಂದಿಸುವನಾರೊ, ನಿನ್ನಾಳಲ್ಲ, ಬೇರಿಹನು |
ಇಂದಿಗಿಂದಿನ ಬದುಕು - ಮಂಕುತಿಮ್ಮ || ೬೮೧
ನಾಳಿನ ಚಿಂತೆಯ ಗೀಳನು ಹೊತ್ತವರೇ ಜಗದಲ್ಲಿ ಸಂಪೂರ್ಣವಾಗಿ ತುಂಬಿದ್ದಾರೆ. ದೂರಾಲೋಚನೆ ತಪ್ಪಲ್ಲ; ಆದರೆ ಆಲೋಚನೆಯೇ ಬದುಕಲ್ಲ. ಮಾನವರ ಬಹು ದೊಡ್ಡ ದೌರ್ಬಲ್ಯವೆಂದರೆ ಭವಿಷ್ಯತ್ತಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡು ವರ್ತಮಾನವನ್ನು ಮರೆಯುವುದು. ಭವಿಷ್ಯದ ಬಗೆಗೆ ಇಟ್ಟುಕೊಳ್ಳುವ ಅತಿಯಾದ ಭಯವನ್ನು ಹೊಂದಿದವರು ಇಂದಿನ ಬದುಕಿನ ರಸಘಳಿಗೆಗಳನ್ನು ಅನುಭವಿಸಲಾರರು. ಇವರಿಗೆ ಕಗ್ಗ ಚಾಟಿ ಬೀಸುತ್ತದೆ.
ಎಂದೋ ಏನೋ ಆಗುತ್ತದೆ ಎಂದು ಇಂದಿನ ವಿಚಾರಗಳನ್ನು ಬಿಡಲಾಗದು. ಬಂದಾಗ ಎದುರಿಸುವ ಅನಿವಾರ್ಯತೆ ಇದ್ದೇ ಇದೆ. ಸಂದರ್ಭಗಳೇ ಇಲ್ಲದೆ ಎದುರಿಸುವುದು, ಕಾಯಿಲೆಯೇ ಬರದಂತೆ ಚುಚ್ಚುಮದ್ದು ತೆಗೆದುಕೊಂಡಂತೆ. ಬಂದಂದು ಹೊಂದಿಸುವುದು ಇದ್ದೇ ಇದೆ. ಮಕ್ಕಳ ಮದುವೆ ಎರಡು ದಶಕಗಳ ಅನಂತರ ಇದೆ ಎಂದು ಇವತ್ತಿನ ಊಟ ಬಿಡುವುದು ಹುಚ್ಚುತನವಾದೀತು. ಅಷ್ಟಕ್ಕೂ ಆ ದಿನದ ನಿರ್ಧಾರ ಮಾಡುವ ವಿಧಿ ನಮ್ಮ ಸೇವಕನಲ್ಲ ಎಂದ ಮೇಲೆ ಅವನು ನಮಗೆ ಬೇಕಾದಂತೆ ವೇದಿಕೆ ರಚಿಸುವುದಿಲ್ಲ. ನಮ್ಮ ಸಾಧನೆಯ ಮೆಟ್ಟಿಲು ನಾವೇ ಹತ್ತಬೇಕು. ಭವಿಷ್ಯದ ಬಗ್ಗೆ ಎಚ್ಚರಿಕೆ ಇರಬೇಕೇ ಹೊರತು ಹೆದರಿಕೆಯಲ್ಲ. ಕುವೆಂಪುರವರ ದೋಣಿಹಾಡಿನ ಘೋಷವಾಕ್ಯ ಮನದಲ್ಲಿ ಮೂಡುತ್ತದೆ. "ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ.''
ಪ್ರತೀ ಕ್ಷಣವನ್ನು ಆನಂದಿಸಿ ಅನುಭವಿಸುವ ಹರಿಕಾರರಾಗೋಣ. ವರ್ತಮಾನದಲ್ಲಿ ಬದುಕೋಣ.